ಅಪರಿಮಿತ ಕತ್ತಲೊಳಗೆ ಬೆಳಕ
ಕಿರಣಗಳ ಹುಡುಕಿದೆ. ಒಂದು ಕವಿತೆ
ಶಕ್ತಿಯಾಗಿ ಎದೆಗೆ ದಕ್ಕಿತು.
ಅಲ್ಲಿ ವಿಶೇಷ ಪರಿಪೂರ್‍ಣ ಪ್ರೀತಿ ಅರಳಿತು.
ಮೆಲ್ಲಗೆ ಹೂ ಶುಭ್ರ ಬಿಳಿಯಾಗಿ, ಕೆಂದಾವರೆ
ಗುಲಾಬಿ ಬಣ್ಣಗಳಲಿ ಅರಳಿ ಘಮ್ಮೆಂದು ಪರಿಸೃಷ್ಠಿ.
ಎದೆಯ ಮೇಲೆ ಬೀಳುವ ಎಲ್ಲಾ
ತರಂಗದ ಬೆಳಕು ಒಳಗೊಳಗೆ ಇಳಿದು
ಬೆಚ್ಚನೆಯ ಕಾವಿನಲಿ ಬಸಿರಾದ ಶಬ್ದಗಳು
ಒಡಲು ಒಜ್ಜೆಯಾಗಿ ಅಗಾಧತೆಯ ಅರಿವು,
ಮೌನದೊಳಗೆ ಸುರುಟಿಕೊಂಡ ದ್ರವ್ಯರಾಶಿ,
ಮಹಾಸ್ಪೋಟವಾದ ಸಾವಿನಾಚೆಯ ಬೆಳಕು ಕಾವ್ಯ.
ಪಠ್ಯಕ್ರಮದ ಪಾಠಶಾಲೆಯ ಪಾಕ ಕುದಿದು
ಶಬ್ದ ರೂಪಗಳ ಅನುಭವ ಕಂಡ ಬಾಳು,
ರೂಪಾಂತರದ ಜಗದ ನಿಯಮ. ತಾಳ್ಮೆಯ
ಹಾಸಿದ ನೆರಳಲಿ ಹಕ್ಕಿಹಾಡು, ಒಳಗೊಳಗೆ ಪ್ರಾಣ
ವಾಯು ಇಳಿದು, ಋತುಗಳ ಸಂವಾದ ಬುದ್ಧನ
ಆತ್ಮದ ಬೆಳದಿಂಗಳು ಹರಡಿ, ಅರಳಿದ
ಅಗೋಚರ ಮನ.
ಇಲ್ಲಿ ಕುಳಿತವರ ಸಾಲು ಕಣ್ಣುಗಳು ಮುಗಿಲ
ಮೋಡಗಳ ಅರಸಿ ಹಾರುವ ಬೆಳ್ಳಕ್ಕಿ ಸಾಲು ಹಿಂಡು,
ಆಸೆಗಳ ಜೀವರಥ ಎಳೆದ ಕನಸುಗಳ ಕನ್ನಡಿ ಪ್ರತಿಫಲಿಸಿ,
ದಾರಿತುಂಬ ಜೀವನದಿ ಹರಿದ ಬಯಲು ಹಸಿರು.
ನಕ್ಷತ್ರಗಳಿಗೆ ತುಪ್ಪ ಹಾಕಿ ಶಬ್ದಗಳ ದೀಪ ಮಾಲೆ ಹಚ್ಚಿ,
ಕತ್ತಲೆಯ ತೆರೆಯ ಬಿಡಿಸಿ ಎಲ್ಲೆಲ್ಲೂ ಬೆಳಕಿನ ಹಾಡುಗಳ
ಹಾಡಿದರು ಜಗದ ಕವಿಗಳು.
*****